ಕನ್ನಡ - (ಒಳ್ಳೆಯ ಸುದ್ದಿ).3gp //1 ಕೊರಿಂಥಿಯರಿಗೆ 15ಪುನರುತ್ಥಾನದ ಪ್ರಮಾಣ1. ಪ್ರಿಯ ಸಹೋದರರೇ, ನಾನು ನಿಮಗೆ ಬೋಧಿಸಿದ ಶುಭಸಂದೇಶವನ್ನು ನೆನಪಿಗೆ ತಂದುಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿದ್ದೀರಿ. ಅದರಲ್ಲಿ ನೆಲೆಯಾಗಿ ನಿಂತಿದ್ದೀರಿ. 2. ನಾನು ನಿಮಗೆ ಶುಭಸಂದೇಶವೆಂದು ತಿಳಿಸಿದ ಸಂಗತಿಯನ್ನು ದೃಢವಾಗಿ ವಿಶ್ವಾಸಿಸಿದರೆ ನೀವು ಜೀವೋದ್ಧಾರವನ್ನು ಪಡೆಯುವಿರಿ. ಇಲ್ಲವಾದರೆ ನಿಮ್ಮ ವಿಶ್ವಾಸ ನಿರರ್ಥಕವಾದೀತು.3. ನಾನು ಪಡೆದುಕೊಂಡದ್ದನ್ನು ಮುಖ್ಯವಾದುದು ಎಂದೆಣಿಸಿ ನಿಮಗೆ ಒಪ್ಪಿಸಿದ್ದೇನೆ. ಅದು ಯಾವುದೆಂದರೆ, ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತಯೇಸು ನಮ್ಮ ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು. 4. ಅವರನ್ನು ಭೂಸ್ಥಾಪನೆ ಮಾಡಲಾಯಿತು. ಅದೇ ಗ್ರಂಥದ ಪ್ರಕಾರ ಮೂರನೆಯ ದಿನ ಅವರು ಪುನರುತ್ಥಾನ ಹೊಂದಿದರು. 5. ಅನಂತರ ಕೇಫನಿಗೂ ಹನ್ನೆರಡು ಮಂದಿಗೂ ಕಾಣಿಸಿಕೊಂಡರು. 6. ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚಿನ ಮಂದಿ ಸಹೋದರರಿಗೆ ಪ್ರತ್ಯಕ್ಷರಾದರು. ಅವರಲ್ಲಿ ಕೆಲವರು ಸತ್ತುಹೋಗಿದ್ದರೂ ಬಹುಮಂದಿ ಇಂದಿಗೂ ಬದುಕಿದ್ದಾರೆ. 7. ಅದಾದ ಮೇಲೆ ಯಕೋಬನಿಗೂ ಅನಂತರ ಪ್ರೇಷಿತರೆಲ್ಲರಿಗೂ ಕಾಣಿಸಿಕೊಂಡರು. 8. ಕಟ್ಟಕಡೆಗೆ ದಿನತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು. 9. ನಾನಾದರೋ ಪ್ರೇಷಿತರಲ್ಲಿ ಕನಿಷ್ಠನು, ಪ್ರೇಷಿತನೆಂಬ ಹೆಸರಿಗೂ ಅಪಾತ್ರನು. ಏಕೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು. 10. ನಾನು ಈಗ ಈ ಸ್ಥಿತಿಯಲ್ಲಿ ಇರುವುದು ದೇವರ ಅನುಗ್ರಹದಿಂದಲೇ. ಅವರ ಅನುಗ್ರಹ ನನ್ನಲ್ಲಿ ವ್ಯರ್ಥವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚು ಶ್ರಮಪಟ್ಟು ಸೇವೆಮಾಡಿದ್ದೇನೆ. ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿರುವ ದೇವರ ಅನುಗ್ರಹವೇ. 11. ನಾನಾದರೇನು, ಅವರಾದರೇನು? ನಾವು ಸಾರುವ ಸಂದೇಶ ಒಂದೇ ಅದನ್ನು ನೀವು ನಂಬಿದ್ದೀರಿ.