ತಾವು ದುಡಿದು ಬೆಳೆದದ್ದೆಲ್ಲಾ ತಮಗೆ ಎಂದು ನ್ಯಾಯವಾಗಿಯೇ ಭಾವಿಸುವ ಮುಗ್ಧ ಉತ್ಸಾಹದ ದೃಷ್ಟಿಕೋನ ಒಂದು ಕಡೆ; ಈ ಜಗತ್ತಿನ ನ್ಯಾಯವೇನೆಂದು ಬಲ್ಲ ಅವರ ತಂದೆ ತಾಯಿಗಳ ಅಸಹಾಯಕತೆ ಇನ್ನೊಂದು ಕಡೆ; ತನ್ನ ನೆಲದಲ್ಲಿ ಬೆಳೆದದ್ದೆಲ್ಲ ತನ್ನದೇ ಎಂದು ಭಾವಿಸುವ ದನಿಯ ದೃಷ್ಟಿಯು ಮತ್ತೊಂದು ಕಡೆ. ಈ ಮೂರು ದೃಷ್ಟಿಕೋನಗಳು ತಮ್ಮ ತಮ್ಮ ರೀತಿಯಲ್ಲಿ ಪ್ರಾಮಾಣಿಕವಾಗಿದೆ.ಕೊರಡ್ಕಲ್ ಶ್ರೀನಿವಾಸರಾವ್ ಅವರು ಮೂವತ್ತರ ದಶಕದಲ್ಲಿ ರಚಿಸಿದ ದನಿಯರ ಸತ್ಯನಾರಾಯಣ ೧೯೩೮ ರಲ್ಲಿ ಪ್ರಕಟವಾದ ಅವರ ನಂದಾದೀಪ ಎಂಬ ಕಥಾಸಂಕಲನದಲ್ಲಿ ಸೇರಿದೆ. ಶೋಷಣೆ ಮತ್ತು ಬಂಡಾಯ ಗಳನ್ನು ವಸ್ತುವಾಗುಳ್ಳ ಆಧುನಿಕ ಕನ್ನಡ ಕಥೆಗಳು ಆದಿಮ ರೂಪಕದಂತೆ ಪ್ರಜ್ವಲಿಸುವ ಎಲ್ಲಾ ಮುಖ್ಯ ಆಂತಾಲಜಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡು ಬಂದಿದೆ. ತನ್ನ ಸೀಮಿತ ಅವಕಾಶದಲ್ಲೇ ವರ್ಗ ಸಮಾಜವೊಂದರ ಸ್ವರೂಪವನ್ನು ಅದರ ಸೂಕ್ಷ್ಮ ರೂಪದಲ್ಲಿ ಕಾಣಿಸಿಕೊಳ್ಳುವ ಈ ಕಥೆ ತನ್ನ ಧ್ವನಿ ಶಕ್ತಿಯಿಂದ ಇಂದಿಗೂ ಓದುಗರ ಗಮನ ಸೆಳೆಯುವಂತಿದೆ.