ಬ್ರಿಟಿಷರು ಜಿಲ್ಲೆಯ ಕೃಷಿ ವ್ಯವಸ್ಥೆ ಮತ್ತು ಭೂಕಂದಾಯವನ್ನು ಸಂಗ್ರಹಿಸುವುದೇ ತಮ್ಮ ಪರಮಗುರಿ ಎಂದು ಆಡಳಿತವನ್ನು ನಡೆಸಿದರು. ಅವರ ಆಡಳಿತ ಯಂತ್ರವೇ ತೆರಿಗೆ ಸಂಗ್ರಹಕ್ಕಾಗಿ ದುಡಿಯುತ್ತಿತ್ತು. ಆನುಷಂಗಿಕವಾಗಿ ನ್ಯಾಯಾಂಗ, ಪೋಲೀಸ್ ವ್ಯವಸ್ಥೆ, ಶಿಕ್ಷಣ, ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳ ವೃದ್ಧಿ ಮುಂತಾದವುಗಳಿಗೆ ಅವರು ಅಗತ್ಯವಿದ್ದಷ್ಟು (ಅಷ್ಟೇ) ಗಮನವನ್ನು ಕೊಡುತ್ತಿದ್ದರು.. ಬಾಸೆಲ್ ಮಿಷನ್ ಮತ್ತು ರೋಮನ್ ಕೆಥೋಲಿಕರ ಮುತುವರ್ಜಿಯಿಂದ ಇಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿ ಬೆಳೆಯಿತು ಹೊರತು ಸರಕಾರದ ಶ್ರಮ ಅದರಲ್ಲಿ ಕಡಿಮೆಯೇ. ಕೃಷಿಯನ್ನು ಹೊರತು ಪಡಿಸಿದ ಇತರ ಉದ್ದಿಮೆಗಳಿಗೆ ಕೂಡಾ ಸರಕಾರ ಗಮನಕೊಟ್ಟದ್ದಿಲ್ಲ. ಬಾಸೆಲ್ ಮಿಷನ್ ಮತ್ತು ಖಾಸಗಿ ವ್ಯಕ್ತಿಗಳ ಸಾಧನೆಯಿಂದ ಇಲ್ಲಿ ಉದ್ಯಮಗಳು ನಿಧಾನವಾಗಿ ಬೆಳೆದವು. ಬ್ರಿಟಿಷರ ಕಾಲದಲ್ಲಿ ಕೃಷಿಯೇ ಪ್ರಧಾನವಾಗಿತ್ತು. ಈ ಕ್ಷೇತ್ರ ಬಹಳ ಸಮೃದ್ಧವಾಗಿದ್ದರೂ ಇದರಲ್ಲಿ ದುಡಿಯುತ್ತಿದ್ದವರು ಬಡವರು ಹಾಗೂ ಅನಕ್ಷರಸ್ಥರಾಗಿಯೇ ಉಳಿಯುತ್ತಿದ್ದರು. ಸರಕಾರದ ಭಯ : ಒಟ್ಟಿನಲ್ಲಿ ಬ್ರಿಟಿಷರ ಆಡಳಿತ ವ್ಯವಸ್ಥೆ, ನ್ಯಾಯಾಂಗಗಳು ತಪ್ಪಿತಸ್ಥರನ್ನು ಬಹಳ ಕಠಿಣವಾಗಿ ಶಿಕ್ಷಿಸುತ್ತಿದ್ದುದರಿಂದ 'ಸರಕಾರದ ಭಯ ಸರ್ವರಿಗೂ' ಇತ್ತು. ಜನರಿಗೆ ನೆಮ್ಮದಿಯಿಂದ ಬದುಕಬಹುದಾದ ಭದ್ರತೆಯನ್ನು ಸರಕಾರ ನೀಡುತ್ತಿತ್ತು. ಜನರ ಆರ್ಥಿಕ ಪರಿಸ್ಥಿತಿ ಬಹಳ ಕಡಿಮೆ ಮಟ್ಟದಲ್ಲಿದ್ದರೂ ಜನರಿಗೆ ಅದಕ್ಕೆ ಕಾರಣ ಪರಕೀಯ ಸರಕಾರ ಎಂದು ಗೊತ್ತಾಗುವ ಸಾಧ್ಯತೆ ಇರಲಿಲ್ಲ.ಬ್ರಿಟಿಷರ ವರ್ತನೆಯನ್ನು ಖಂಡಿಸುವ ಕತೆ ಕಾದಂಬರಿಗಳಲ್ಲಿ ಅವರ ದೌಷ್ಟ
ವೈಯಕ್ತಿಕ ಸ್ವರೂಪದ್ದೆಂದು ಕಾಣುವುದರಿಂದ (ಮತ್ತು ಜನ ಅದನ್ನು ಹಾಗೆಯೇ ಗ್ರಹಿಸಿರಬಹುದಾದ್ದರಿಂದ) ವಸಾಹತುಶಾಹಿಗೆ ಪ್ರತಿರೋಧ ಜನಸಮುದಾಯದ ವಾಣಿಯಾಗಿ ಸಾಹಿತ್ಯದಲ್ಲಿ ಮೂಡಿಬರಲಿಲ್ಲ ಎನ್ನುವುದೇ ಇಲ್ಲಿ ಗಮನಿಸಬೇಕಾದ ಸಂಗತಿ.