Translated and voiced by Abdussalam Puthige. The translation of the whole Surah - ಸೂಕ್ತ : 1
ಸೂರ್ಯನನ್ನು ಮಡಚಿ ಬಿಡಲಾದಾಗ,
ಸೂಕ್ತ : 2
ಮತ್ತು ನಕ್ಷತ್ರಗಳು ನಿಸ್ತೇಜವಾದಾಗ,
ಸೂಕ್ತ : 3
ಮತ್ತು ಪರ್ವತಗಳನ್ನು ಚಲಾಯಿಸಲಾದಾಗ,
ಸೂಕ್ತ : 4
ಮತ್ತು ತುಂಬು ಗರ್ಭಿಣಿಯಾಗಿರುವ ಒಂಟೆಗಳನ್ನು ಬಿಟ್ಟು ಬಿಡಲಾದಾಗ,
ಸೂಕ್ತ : 5
ಮತ್ತು ಕಾಡು ಪ್ರಾಣಿಗಳನ್ನೆಲ್ಲಾ ಒಟ್ಟು ಸೇರಿಸಲಾದಾಗ,
ಸೂಕ್ತ : 6
ಮತ್ತು ಸಮುದ್ರಗಳನ್ನು ಉಕ್ಕೇರಿಸಲಾದಾಗ,
ಸೂಕ್ತ : 7
ಮತ್ತು ಜೀವಗಳನ್ನು (ಶರೀರಗಳೊಂದಿಗೆ) ಜೋಡಿಸಲಾದಾಗ,
ಸೂಕ್ತ : 8
ಮತ್ತು ಜೀವಂತ ಹೂಳಲ್ಪಟ್ಟ ಹೆಣ್ಣು ಶಿಶುವಿನೊಡನೆ ಪ್ರಶ್ನಿಸಲಾದಾಗ -
ಸೂಕ್ತ : 9
ಯಾವ ಪಾಪಕ್ಕಾಗಿ ಆಕೆಯನ್ನು ಕೊಲ್ಲಲಾಯಿತೆಂದು.*
ಸೂಕ್ತ : 10
ಮತ್ತು (ಕರ್ಮಗಳ) ಕಡತಗಳನ್ನು ತೆರೆಯಲಾದಾಗ,
ಸೂಕ್ತ : 11
ಮತ್ತು ಆಕಾಶದ ಕವಚವನ್ನು ಸರಿಸಲಾದಾಗ,
ಸೂಕ್ತ : 12
ಮತ್ತು ನರಕದ ಅಗ್ನಿಯನ್ನು ಭುಗಿಲೆಬ್ಬಿಸಲಾದಾಗ,
ಸೂಕ್ತ : 13
ಮತ್ತು ಸ್ವರ್ಗವನ್ನು ಹತ್ತಿರ ತರಲಾದಾಗ,
ಸೂಕ್ತ : 14
ಪ್ರತಿಯೊಬ್ಬನಿಗೂ ತಿಳಿದು ಬಿಡುವುದು ತಾನೇನು ತಂದಿರುವೆನೆಂದು.
ಸೂಕ್ತ : 15
ಹಾಗಲ್ಲ - ನಾನು, ಹಿನ್ನಡೆಯುವ ನಕ್ಷತ್ರಗಳ ಆಣೆ ಹಾಕುತ್ತೇನೆ.
ಸೂಕ್ತ : 16
ಅವು ಸಂಚರಿಸುತ್ತವೆ ಮತ್ತು ಕಣ್ಮರೆಯಾಗುತ್ತವೆ.
ಸೂಕ್ತ : 17
ಮತ್ತು ಇರುಳು ಕಣ್ಮರೆಯಾಗುವ ಹೊತ್ತಿನ ಆಣೆ.
ಸೂಕ್ತ : 18
ಮತ್ತು ಮುಂಜಾವು ಉಸಿರಾಡ ತೊಡಗುವಾಗಿನಾಣೆ.
ಸೂಕ್ತ : 19
ಇದು (ಕುರ್‌ಆನ್) ಗೌರವಾನ್ವಿತ ದೂತನೊಬ್ಬನು (ಜಿಬ್ರೀಲ್) ತಲುಪಿಸಿರುವ ಸಂದೇಶವಾಗಿದೆ.
ಸೂಕ್ತ : 20
ಅವನು ತುಂಬಾ ಬಲಿಷ್ಠನೂ ವಿಶ್ವ ಸಿಂಹಾಸನದ ಒಡೆಯನ ಬಳಿ ಉನ್ನತ ಸ್ಥಾನ ಉಳ್ಳವನೂ ಆಗಿದ್ದಾನೆ.
ಸೂಕ್ತ : 21
ಅವನು ಅನುಸರಣೀಯನೂ ವಿಶ್ವಾಸಾರ್ಹನೂ ಆಗಿರುತ್ತಾನೆ.
ಸೂಕ್ತ : 22
ನಿಮ್ಮ ಸಂಗಾತಿ (ದೂತರು) ಹುಚ್ಚರೇನಲ್ಲ.
ಸೂಕ್ತ : 23
ಅವರು ತೆರೆದ ಬಾನಿನಂಚಿನಲ್ಲಿ ಆತನನ್ನು (ಜಿಬ್‌ರೀಲ್‌ರನ್ನು) ಕಂಡರು.
ಸೂಕ್ತ : 24
ಅವರು ಅಜ್ಞಾತ ಲೋಕದ ಮಾಹಿತಿಗಳನ್ನು ತಲುಪಿಸುವುದರಲ್ಲಿ ಜಿಪುಣರಲ್ಲ.
ಸೂಕ್ತ : 25
ಇದು (ಕುರ್‌ಆನ್) ಶಪಿತ ಶೈತಾನನ ವಚನವಲ್ಲ.
ಸೂಕ್ತ : 26
ನೀವು ಅದೆಲ್ಲಿ ಅಲೆಯುತ್ತಿರುವಿರಿ.
ಸೂಕ್ತ : 27
ಇದು ಸರ್ವ ಲೋಕಕ್ಕಾಗಿರುವ ಉಪದೇಶವಾಗಿರುತ್ತದೆ.
ಸೂಕ್ತ : 28
ನಿಮ್ಮ ಪೈಕಿ ಇಷ್ಟ ಉಳ್ಳವನು ನೇರ ಮಾರ್ಗವನ್ನು ಹಿಡಿಯಲಿ.
ಸೂಕ್ತ : 29
ನಿಮ್ಮ ಇಚ್ಛೆಯಿಂದ ಏನೂ ಆಗುವುದಿಲ್ಲ - ಸರ್ವಲೋಕಗಳ ಒಡೆಯನಾದ ಅಲ್ಲಾಹನು ಇಚ್ಛಿಸುವ ತನಕ.