ಕನ್ನಡದ ನುಡಿಯೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಏಕಶಿಲೆಯಂತಹ ಭಾಷೆಯಲ್ಲ. ಹಾಗೆ ನೋಡಿದರೆ, ಕನ್ನಡವೆಂಬುದು ಒಂದೇ ಒಂದು ಭಾಷೆಯೂ ಅಲ್ಲ. ಈ ಮಾತನ್ನು ಎಲ್ಲ ಭಾಷೆಗಳಿಗೂ ಅನ್ವಯಿಸಬಹುದು. ಹಲವು ಆಡುರೂಪುಗಳು, ಹತ್ತಾರು ಭಾಷೆಗಳಿಂದ ಎರವಲು ಪಡೆದ ಪದಗಳು, ಹಲವು ಬಗೆಯ ಧ್ವನಿ ಸಂಚಾರಗಳು, ಭಿನ್ನ ದೇಹಭಾಷೆಗಳು ಹೀಗೆ, ಕನ್ನಡಕ್ಕೆ ದಕ್ಕಿರುವ ಬಹು ಆಯಾಮಗಳ ಚೆಂದವನ್ನು ಕನ್ನಡ ಮಾಸ ನವೆಂಬರಿನಲ್ಲಿ *ಟೀಚರ್ ಪತ್ರಿಕೆ* ಸಂಭ್ರಮಿಸುತ್ತದೆ.
ಹಾವೇರಿಯವರಾದ ಸುಜಾತಾ ಗಿಡ್ಡಪ್ಪಗೌಡ್ರು ಕಲಿತದ್ದು ಧಾರವಾಡದಲ್ಲಿ. ಈಗಿರುವುದು ಹೊಸಪೇಟೆಯ ಕಮಲಾಪುರದಲ್ಲಿ. ಉತ್ತರ ಕರ್ನಾಟಕದ ಎಲ್ಲ ಕಡೆಗಳಲ್ಲೂ ಧಾರವಾಡ ಕನ್ನಡ ಮಾತಾನಾಡುತ್ತಾರೆಂಬ ತಪ್ಪುತಿಳುವಳಿಕೆ ಎಲ್ಲರಲ್ಲಿದೆ. ಬೀದರಿನ ಕನ್ನಡವೇ ಬೇರೆ ಹೊಸಪೇಟೆಯ ಕನ್ನಡವೇ ಬೇರೆ.