ಗ್ರಂಥಾಲಯಕ್ಕೆ ಗೋಡೆಗಳಿಲ್ಲ..
ಇಲ್ಲ ಇಲ್ಲ ಇಲ್ಲವೇ ಇಲ್ಲ
ಗ್ರಂಥಾಲಯಕ್ಕೆ ಗೋಡೆಗಳಿಲ್ಲ..
ಅಕಾಶಕ್ಕೆ ಅಂಚುಗಳಿಲ್ಲ
ಕನಸು ಕಪಾಟಿಗೆ ಬಾಗಿಲೇ ಇಲ್ಲ
ಓದುವೆ ನಾನು ಈ ಜಗವನ್ನು
ತೆರೆಯುವೆ ಈಗಲೆ ಹೊಸ ಪುಟವನ್ನು
ಹಾಳೆಯ ತುಂಬಾ ಹರಡಿದೆ ನೋಡು
ನೀಲಿ ಬಾನು, ಹಸುರಿನ ಕಾನು
ಇಲ್ಲ ಇಲ್ಲ ಇಲ್ಲವೇ ಇಲ್ಲ
ಗ್ರಂಥಾಲಯಕ್ಕೆ ಗೋಡೆಗಳಿಲ್ಲ..
ಕಟ್ಟುವೆ ನಾನು ಪುಸ್ತಕ ಸೇತುವೆ,
ಪ್ರೀತಿ ಪದಗಳ ಮನೆಯನ್ನು
ಅಜ್ಜನು ಅಜ್ಜಿಯು ಅಮ್ಮ, ಅಪ್ಪನು
ತೆರೆಯುತ ಹೋಗುವೆ ಬದುಕನ್ನು
ಇಲ್ಲ ಇಲ್ಲ ಇಲ್ಲವೇ ಇಲ್ಲ
ಗ್ರಂಥಾಲಯಕ್ಕೆ ಗೋಡೆಗಳಿಲ್ಲ..
ಆಡುವೆ ಅಲ್ಲಿ, ಓಡುವೆ ಇಲ್ಲಿ
ಭೂಮ್ಯಾಕಾಶದ ಬಯಲಲ್ಲಿ.
ಮಾತು, ಮೋಜು, ಹಾಡು ಎಲ್ಲ
ಪುಸ್ತಕವೆಂದರೆ ಅಕ್ಷರವಲ್ಲ.
ಇಲ್ಲ ಇಲ್ಲ ಇಲ್ಲವೇ ಇಲ್ಲ
ಗ್ರಂಥಾಲಯಕ್ಕೆ ಗೋಡೆಗಳಿಲ್ಲ..
ಬದುಕಿನ ಹೊಲದಲಿ ಮಮತೆಯ ತೋಟ
ಬಿತ್ತುವೆ ಈಗ ಪ್ರೀತಿಯ ಬೀಜ
ಬೆಳೆಯುವೆ ನಾನು ಸ್ನೇಹದ ಫಸಲು,
ಹರಡುವೆ ಎಲ್ಲೆಡೆ ಓದಿನ ಘಮಲು.
ಇಲ್ಲ ಇಲ್ಲ ಇಲ್ಲವೇ ಇಲ್ಲ
ಗ್ರಂಥಾಲಯಕ್ಕೆ ಗೋಡೆಗಳಿಲ್ಲ..
ಉದಯ ಗಾಂವಕಾರ