ತೆರಿಗೆ ಪಾಲು ಹಂಚಿಕೆಯಲ್ಲಿ ನ್ಯಾಯ ದೊರಕದಿದ್ದರೆ ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರವಾಗಲಿದೆ ಎಂಬ ಹೇಳಿಕೆ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಂಸದ ಡಿ.ಕೆ. ಸುರೇಶ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಭಾನುವಾರ ಬೆಳಿಗ್ಗೆ 11ರ ಸುಮಾರಿಗೆ ನೂರಕ್ಕೂ ಹೆಚ್ಚು ಯುವ ಮೋರ್ಚಾ ಕಾರ್ಯಕರ್ತರು ಬೆಂಗಳೂರಿನ ಸದಾಶಿವನಗರದಲ್ಲಿರುವ ಸುರೇಶ್ ಅವರ ನಿವಾಸದತ್ತ ನುಗ್ಗಿದ್ದಾರೆ. ಅವರನ್ನು ತಡೆಯಲು ಪೊಲೀಸರು ಹರಸಾಹಸಪಡಬೇಕಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ ಪೊಲೀಸರು, ಕೆಲವು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಘಟನೆಯ ಬಳಿಕ ಸುರೇಶ್ ನಿವಾಸಕ್ಕೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ರಷ್ಯಾದ ಮಾಸ್ಕೊದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಕೆಲಸಕ್ಕಿದ್ದ ಭಾರತದ ಪ್ರಜೆಯನ್ನು, ಪಾಕಿಸ್ತಾನದ ಐಎಸ್ಐ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿಸಲಾಗಿದೆ.
ಉತ್ತರ ಪ್ರದೇಶದ ಹಾಪುರ ಜಿಲ್ಲೆಯ ಶಾ ಮೊಹಿಯುದ್ದೀನ್ ಗ್ರಾಮದ ಸತೇಂದ್ರ ಸಿವಾಲ್ ಎಂಬಾತನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಭಾನುವಾರ ಹೊರಡಿಸಿದ ಅಧಿಕೃತ ಪ್ರಕಟಣೆ ತಿಳಿಸಿದೆ.
2021ರಿಂದಲೂ ರಾಯಭಾರ ಕಚೇರಿಯ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಿವಾಲ್ನನ್ನು ಮೀರಠ್ನಲ್ಲಿರುವ ಎಟಿಎಸ್ ಅಧಿಕಾರಿಗಳು ತನಿಖೆಗಾಗಿ ಸಮನ್ಸ್ ನೀಡಿ ಕರೆಸಿಕೊಂಡಿದ್ದರು. ವಿಚಾರಣೆ ವೇಳೆ ಸಮಂಜಸ ಉತ್ತರಗಳನ್ನು ನೀಡದ ಆತ ಬಳಿಕ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ನನ್ನನ್ನು ಜೈಲಿಗೆ ಕಳುಹಿಸಿದರೂ, ಜನರಿಗಾಗಿ ನಡೆಯುತ್ತಿರುವ ನನ್ನ ಸರ್ಕಾರದ ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.
ನವದೆಹಲಿಯ ಕಿರಾರಿಯಲ್ಲಿ ಎರಡು ಶಾಲಾ ಕಟ್ಟಡಗಳ ಶಂಕುಸ್ಠಾಪನೆ ನೆರವೇರಿಸಿ ಮಾತನಾಡಿದ ಅವರು, ‘ಶಾಲೆಗಳನ್ನು ನಿರ್ಮಿಸಿದ್ದಕ್ಕಾಗಿ ಮನೀಷ್ ಸಿಸೋಡಿಯಾ ಅವರನ್ನು, ಮೊಹಲ್ಲಾ ಕ್ಲಿನಿಕ್ಗಳನ್ನು ನಿರ್ಮಿಸಿದ್ದಕ್ಕಾಗಿ ಸತ್ಯೇಂದ್ರ ಜೈನ್ ಅವರನ್ನು ಜೈಲಿಗಟ್ಟಿದ್ದಾರೆ’ ಎಂದು ಕಿಡಿಕಾರಿದರು.
‘ಒಂದು ವೇಳೆ ನೀವು ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಿದರೂ, ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್ಗಳ ನಿರ್ಮಾಣ ಹಾಗೂ ದೆಹಲಿ ಜನರಿಗೆ ಸಿಗುತ್ತಿರುವ ಉಚಿತ ಚಿಕಿತ್ಸಾ ಕೆಲಸ ಕಾರ್ಯಗಳೂ ನಿಲ್ಲುವುದಿಲ್ಲ’ ಎಂದು ಅವರು ಗುಡುಗಿದರು.
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿರುವ ಭಾರತ ತಂಡ, ಎದುರಾಳಿ ಇಂಗ್ಲೆಂಡ್ ಗೆಲುವಿಗೆ 399 ರನ್ಗಳ ಗುರಿ ನೀಡಿದೆ.
ಗುರಿ ಬೆನ್ನಟ್ಟಿರುವ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡ ಮೂರನೇ ದಿನವಾದ ಭಾನುವಾರದ ಆಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 67 ರನ್ ಗಳಿಸಿದೆ. ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು, 332 ರನ್ ಗಳಿಸುವ ಸವಾಲು ಇಂಗ್ಲೆಂಡ್ ಮುಂದಿದೆ.
ರೋಹಿತ್ ಶರ್ಮಾ ಬಳಗ ಇದಕ್ಕೂ ಮುನ್ನ ಎರಡನೇ ಇನಿಂಗ್ಸ್ನಲ್ಲಿ 255 ರನ್ಗಳಿಗೆ ಆಲೌಟಾಯಿತು. ಯುವ ಬ್ಯಾಟರ್ ಶುಭಮನ್ ಗಿಲ್, ಶತಕದ ಮೂಲಕ ತಂಡಕ್ಕೆ ಆಸರೆಯಾದರು. ಅವರು 147 ಎಸೆತಗಳಲ್ಲಿ 104 ರನ್ ಗಳಿಸಿದರು.
ಸೂರತ್ನಲ್ಲಿ ಕೊನೆಗೊಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ತಂಡ ರೈಲ್ವೇಸ್ ವಿರುದ್ಧ ಒಂದು ವಿಕೆಟ್ನ ರೋಚಕ ಜಯ ಸಾಧಿಸಿತು. ಗೆಲುವಿಗೆ 226 ರನ್ ಗಳಿಸಬೇಕಿದ್ದ ಕರ್ನಾಟಕ ತಂಡ 9 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಅಜೇಯ 67 ರನ್ ಗಳಿಸಿದ ಮನೀಷ್ ಪಾಂಡೆ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಎಎಪಿ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಅಪರಾಧ ವಿಭಾಗದ ಪೊಲೀಸರು ದೆಹಲಿಯ ಹಣಕಾಸು ಸಚಿವೆ ಆತಿಶಿ ಅವರಿಗೆ ಭಾನುವಾರ ನೋಟಿಸ್ ನೀಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೂ ಪೊಲೀಸರು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶನಿವಾರ ನೋಟಿಸ್ ನೀಡಿದ್ದರು.