ಮುಂಬೈ ಬಳಿಯ ಸಮುದ್ರದಲ್ಲಿ ಮುಳುಗಿದ್ದ ಹಡಗಿನ 177 ಸಿಬ್ಬಂದಿ ರಕ್ಷಣೆ
ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಣೆ: ಇಂದು ತೀರ್ಮಾನ
2ರಿಂದ 18 ವರ್ಷದವರ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಶೀಘ್ರ ಆರಂಭ: ವಿ.ಕೆ. ಪೌಲ್
ನಾರದಾ ಲಂಚ ಹಗರಣ: ಸುವೇಂದು ಅಧಿಕಾರಿ ತನಿಖೆಗೆ ಅನುಮತಿ ಸಿಕ್ಕಿಲ್ಲ ಎಂದ ಸಿಬಿಐ
* ಮುಂಬೈ ಸಮುದ್ರ ತೀರದಿಂದ 35 ನಾಟಿಕಲ್ ಮೈಲಿ ದೂರದಲ್ಲಿ ಮುಳುಗಿದ್ದ ಬಾರ್ಜ್ ಪಾಪಾ ಪಿ 305 ಹಡಗಿನ 177 ಸಿಬ್ಬಂದಿಯನ್ನು ರಕ್ಷಿಸುವಲ್ಲಿ ನೌಕಾಪಡೆ, ಕೋಸ್ಟ್ ಗಾರ್ಡ್ ಯಶಸ್ವಿಯಾಗಿದೆ. 20 ಗಂಟೆಗಳ ಕಾರ್ಯಾಚರಣೆ ಬಳಿಕ ಮಂಗಳವಾರ ತಡರಾತ್ರಿ ಈ ಯಶಸ್ಸು ಸಿಕ್ಕಿದೆ.
ತೌತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಸೋಮವಾರ ಹಡಗು ಸಮುದ್ರದಲ್ಲಿ ಮುಳುಗಿತ್ತು. ಹಡಗಿನಲ್ಲಿ 273 ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದ್ದು, ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳಿಸಲಾಗಿದೆ. ಭಾರತೀಯ ನೌಕಾಪಡೆಯ ಹಡಗುಗಳಾದ ಬಿಯಾಸ್, ಬೆಟ್ವಾ, ತೆಗ್, ಐಎನ್ಎಸ್ ಕೊಚ್ಚಿ, ಐಎನ್ಎಸ್ ಕೋಲ್ಕತ್ತಾ ಮತ್ತು ನೌಕಾ ಹೆಲಿಕಾಪ್ಟರ್ಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.
––––––––––––––––––––––––––––––
* ಕೋವಿಡ್ ಲಾಕ್ಡೌನ್ ವಿಸ್ತರಿಸುವ ಮತ್ತು ಸಂಕಷ್ಟದಲ್ಲಿರುವ ರಾಜ್ಯದ ಜನರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವ ಬಗ್ಗೆ ಇಂದು ಬೆಳಿಗ್ಗೆ ನಡೆಯುವ ಸಚಿವರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸಭೆ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋವಿಡ್ ಸ್ಥಿತಿಗತಿಯ ಬಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದು, ಅಲ್ಲಿ ತೀರ್ಮಾನ ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿವೆ.
ಇದೇ 24 ಕ್ಕೆ ಲಾಕ್ಡೌನ್ ಕೊನೆಗೊಳ್ಳುತ್ತಿದೆ. ಆದರೆ, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಆಗದಿರುವ ಕಾರಣ ಲಾಕ್ಡೌನ್ ಮುಂದುವರಿಸಬೇಕು ಎಂಬ ಒತ್ತಡ ಹೆಚ್ಚಾಗಿದೆ. ಬಹುತೇಕ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಿಂಗಳ ಕೊನೆಯವರೆಗೆ ಲಾಕ್ಡೌನ್ ಮುಂದುವರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಉತ್ತರ ಪ್ರದೇಶದ ಕಂದಾಯ ಮತ್ತು ಪ್ರವಾಹ ನಿಯಂತ್ರಣ ಸಚಿವ ವಿಜಯ್ ಕಶ್ಯಪ್ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಶ್ಯಪ್ ಅವರಿಗೆ 52 ವರ್ಷ ವಯಸ್ಸಾಗಿತ್ತು. ಕೋವಿಡ್-19 ಎರಡನೇ ಅಲೆಯಲ್ಲಿ ಸೋಂಕಿನಿಂದ ಮೃತಪಟ್ಟವರಲ್ಲಿ ಉತ್ತರ ಪ್ರದೇಶದ ಐದನೇ ಬಿಜೆಪಿ ಶಾಸಕರಾಗಿದ್ದಾರೆ.
ಕಶ್ಯಪ್ ಅವರ ಸಾವಿಗೆ ಕಂಬನಿ ಮಿಡಿದಿರುವ ಪ್ರಧಾನಿ ಮೋದಿ, 'ಬಿಜೆಪಿ ಮುಖಂಡ ಹಾಗೂ ಉತ್ತರ ಪ್ರದೇಶ ಸಚಿವ ವಿಜಯ್ ಕಶ್ಯಪ್ ಅವರ ನಿಧನದ ಸುದ್ದಿಯಿಂದ ಬೇಸರವಾಗಿದೆ. ಅವರು ತಮ್ಮ ಜೀವನವನ್ನು ಸಾರ್ವಜನಿಕರಿಗೆ ಮುಡಿಪಾಗಿಟ್ಟಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದು ಟ್ವೀಟ್ ಮಾಡಿದ್ದಾರೆ.
–––––––––––––––––––––––––––––
* ಭಾರತ್ ಬಯೋಟೆಕ್ ಸಂಸ್ಥೆಯು ಎರಡರಿಂದ 18 ವರ್ಷ ವಯಸ್ಸಿನವರಿಗೆ ಕೋವ್ಯಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗವನ್ನು 10–12 ದಿನಗಳಲ್ಲಿ ಆರಂಭಿಸಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಹೇಳಿದ್ದಾರೆ.
ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರವು (ಡಿಸಿಜಿಐ) ಕೋವ್ಯಾಕ್ಸಿನ್ ಲಸಿಕೆಯನ್ನು 2ರಿಂದ 18 ವರ್ಷ ವಯೋಮಾನದವರ ಮೇಲೆ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ನೀಡಿದೆ. ಮುಂದಿನ 10–12 ದಿನಗಳಲ್ಲಿ ಟ್ರಯಲ್ಗಳನ್ನು ಆರಂಭಿಸಲಾಗುವುದಾಗಿ ತಿಳಿಸಲಾಗಿದೆ ಎಂದು ಡಾ.ಪೌಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
–––––––––––––––––––––––––––
* ಪಶ್ಚಿಮ ಬಂಗಾಳದ ನಾರದಾ ಹಗರಣದಲ್ಲಿ ಮುಕುಲ್ ರಾಯ್ ಮತ್ತು ಟಿಎಂಸಿ ಸಂಸದ ಅಪರೂಪ ಪೊದ್ದಾರ್ ಅವರ ವಿರುದ್ಧ ಯಾವುದೇ ಪುರಾವೆ ಸಿಕ್ಕಿಲ್ಲ. ಸುವೇಂದು ಅಧಿಕಾರಿ ಅವರ ವಿರುದ್ಧ ತನಿಖೆಗೆ ಅನುಮತಿ ಕೋರಿ ಲೋಕಸಭಾ ಸ್ಪೀಕರ್ಗೆ ಪತ್ರ ಬರೆಯಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
2019ರ ಏಪ್ರಿಲ್ 6ರಂದು ಈ ಪತ್ರ ಬರೆಯಲಾಗಿದೆ. ಅನುಮತಿ ಕೋರಿ ಎರಡು ವರ್ಷಗಳಾದರೂ ಸ್ಪೀಕರ್ ಅವರು ಇನ್ನೂ ಅನುಮತಿ ಕೊಟ್ಟಿಲ್ಲ.
ಈ ಮಧ್ಯೆ, ನಾರದಾ ಹಗರಣದಲ್ಲಿ ಸಿಬಿಐ ಬಂಧಿಸಿರುವ ಪಶ್ಚಿಮ ಬಂಗಾಳದ ಸಚಿವ ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರಾ ಮತ್ತು ಪಕ್ಷದ ಮಾಜಿ ಮುಖಂಡ ಸೋವನ್ ಚಟರ್ಜಿ ಅವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.
–––––––––––––––––––––––––
ಕನ್ನಡ ಧ್ವನಿ ಪ್ರಜಾವಾಣಿ ವಾರ್ತೆಗಳನ್ನು ಕೇಳಿದಿರಿ. ಮುಂದಿನ ವಾರ್ತಾ ಪ್ರಸಾರ ಮಧ್ಯಾಹ್ನ 2 ಗಂಟೆಗೆ
ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಡಾಟ್ ನೆಟ್ ನೋಡಿ.