#ಪ್ರಜಾವಾಣಿ #ಚುರುಮುರಿ #Prajavani
ಸದಸ್ಯರ ಕ್ಷೀಣ ಹಾಜರಾತಿಯಿಂದ ಬೈ–ಟು
ಬಳಗದ ಅಡ್ಡಾ, ಚುನಾವಣೆಯಲ್ಲಿ ಸೋತ ಅಭ್ಯರ್ಥಿಯ ಮನೆಯಂತಾಗಿತ್ತು. ಸೈಕ್ಲೋನ್ ಚಳಿಯಲ್ಲಿ ನಡುಗುತ್ತಲೇ ಕೆಲವರು ಆತ್ಮಾವಲೋಕನ ನಡೆಸಿದ್ದರು.
‘ಹಿಂದೆ ಕಮ್ಯುನಿಷ್ಟರು ಚೀನಾದಲ್ಲಿ ಮಳೆಯಾದರೆ ಭಾರತದಲ್ಲಿ ಕೊಡೆ ಹಿಡಿಯುತ್ತಿ
ದ್ದರು. ಈಗ ಚೆನ್ನೈಯಲ್ಲಿ ಚಂಡಮಾರುತ ಬೀಸಿ
ದರೆ ಕರ್ನಾಟಕದಲ್ಲಿ ಸ್ವೆಟರ್ ಧರಿಸುವಂತಾಗಿದೆ’.
‘ಇದನ್ನೇ ನೆಪ ಮಾಡಿಕೊಂಡು ವಾಕಿಂಗು, ಟಾಕಿಂಗು ತಪ್ಪಿಸಿದರೆ ಹೇಗೆ? ಬೆಳಗ್ಗೆ ಹೊರ ಸ್ವೆಟರು, ಸಂಜೆ ಒಳ ಸ್ವೆಟರು ಧರಿಸಿದರೆ ಆಯ್ತಪ್ಪ’.
‘ಬಣ್ಣಬಣ್ಣದ ಉಣ್ಣೇ ಸ್ವೆಟರು ಗೊತ್ತು, ಇದ್ಯಾವುದು ಒಳ ಸ್ವೆಟರು?’
‘ಇದೇನೂ ಹೊಸ ಮ್ಯಾಟರು ಅಲ್ಲ. ಶಿಗ್ಗಾವಿ, ಚನ್ನಪಟ್ಟಣ ಚುನಾವಣೆಯ ಒಳ ಹೊಡೆತದ ಗುಟುರು ಇದ್ದಂತೆ. ಹೊರಗೆ ಕಾಣಿಸೋದೇ ಇಲ್ಲ, ಒಳಗೇ ಕುಳಿತು ಬೆಚ್ಚನೆಯ ಫಲಿತಾಂಶ ನೀಡುತ್ತದೆ!’
‘ಓಹೋ... ನಮ್ಮ ಕಡೆ ಇದಕ್ಕೆ ‘ಪೆಗ್ ಸ್ವೆಟರ್’ ಅಂತ ಕರೀತಾರೆ. ಇದು ಹೊನ್ನಾಳಿ ಹೊಡೆತ ಇದ್ದಂತೆ. ಹೆಚ್ಚಾದರೆ ಹೊನ್ನಾಳಿ ಹೋರಿ ಥರ ತಿವಿಯುತ್ತದೆ’.
‘ಚಳಿ ತರುವ ಬಿರುಗಾಳಿಯಂತೆ ಆಗಾಗ ರಾಜಕಾರಣದಲ್ಲಿ ಬೆವರುಗಾಳಿ ಬೀಸುವುದುಂಟು. ಫೆಂಜಲ್ ಚಂಡಮಾರುತಕ್ಕೆ ಸಾಟಿಯಾಗಿ ಯತ್ನಾಳ್ ಮೊಂಡಮಾರುತ ಆರ್ಭಟಿಸುತ್ತಿಲ್ಲವೇ? ಮೋಡದ ಮಳೆ, ಮುಡಾದ ಗಾಳಿ ನಿಂತರೂ ಯತ್ನಾಳ್ ಮರದ ಹನಿ ನಿಲ್ಲುವ ಲಕ್ಷಣವೇ ಇಲ್ಲ!’
‘ಹೌದು, ಈ ಯತ್ನಾಳ್ ಜಿಟಿಜಿಟಿಗೆ ದವಳಗಿರಿ ನಿವಾಸಿಗಳು ಬೆವರು ಸುರಿಸುತ್ತಿದ್ದಾರಂತೆ’.
‘ಹಾಸನದಲ್ಲಿ ಅಪ್ಪಳಿಸಲಿದ್ದ ‘ಸ್ವಾಭಿಮಾನಿ’ ಹೆಸರಿನ ಪ್ರಚಂಡ ಮಾರುತವನ್ನು ದೆಹಲಿ ಹವಾಮಾನ ಇಲಾಖೆಯವರು ತಡೆಹಿಡಿದು ‘ಜನಕಲ್ಯಾಣ’ ಮಂದಮಾರುತದ ಮುನ್ಸೂಚನೆ ನೀಡಿದ್ದಾರೆ’.
‘ಒಂದೊಂದಾಗಿ ಬೀಸುತ್ತಿರುವ ಚಂಡ, ಮೊಂಡ, ಮಂದ, ಪ್ರಚಂಡ ಮಾರುತಗಳ ನೆಪದಲ್ಲಿ ಬೆಳಗಾವಿ ಅಧಿವೇಶನಶಾಲೆಗೆ ಶಾಸಕ ವಿದ್ಯಾರ್ಥಿಗಳ ಗೈರು ತಪ್ಪಿದ್ದಲ್ಲ’ ತಿಂಗಳೇಶ ಮಂಗಳ ಹಾಡಿದ