ಒಂದು ಕಡೆ ಚಿಗುರುತಲಿ, ಒಂದು ಕಡೆ ಬಾಡುತಲಿ ।
ಕುಂದುತಿರೆ ಕೊಂಬೆ, ಮುಂಡದಲಿ ಹಬ್ಬುತಲಿ ।।
ಎಂದೆಂದುಮಶ್ವತ್ತ ಹಳೆಹೊಸದು, ತಾನದಾ ।
ಸ್ಪಂದನವೋ ಬ್ರಹ್ಮನದು – ಮಂಕುತಿಮ್ಮ || 561
ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ ।
ತೀವಿರ್ಪುದದು ಕೆಳಗೆ ನಮ್ಮ ಲೋಕದಲ್ಲಿ ।।
ನಾವದರ ಕಡ್ಡಿಯೆಲೆ, ಚಿಗುರುವೆವು, ಬಾಡುವೆವು ।
ಸಾವು ಮರಕೇನಿಲ್ಲ – ಮಂಕುತಿಮ್ಮ।। 560
ಪರಮಪದದಲಿ ನೋಡು; ಬೇರುಗಳ್ ವ್ಯೋಮದಲಿ ।
ಧರೆಗಿಳಿದ ಕೊಂಬೆರೆಂಬೆಗಳು, ಬಿಳಲುಗಳು ।।
ಚಿರಜೀವಿವೃಕ್ಷವಿದು ವಿಶ್ವಜೀವಾಶ್ವತ್ಥ ।
ಪರಿಕಿಸಿದರರ್ಥವನು – ಮಂಕುತಿಮ್ಮ।। 559