Translated and voiced by Abdussalam Puthige. The translation of the whole Surah. -
ಸೂಕ್ತ : 1
ವಿನಾಶವಿದೆ ತೂಕದಲ್ಲಿ ಕೊರತೆ ಮಾಡುವವರಿಗೆ.
ಸೂಕ್ತ : 2
ಅವರು ಜನರಿಂದ ಅಳೆದು ಪಡೆಯುವಾಗ ಪೂರ್ಣವಾಗಿ ಪಡೆಯುತ್ತಾರೆ.
ಸೂಕ್ತ : 3
ಆದರೆ ಇತರರಿಗೆ ಅಳೆದು ಅಥವಾ ತೂಗಿ ಕೊಡುವಾಗ ಕಡಿಮೆಗೊಳಿಸಿ ಕೊಡುತ್ತಾರೆ.
ಸೂಕ್ತ : 4
ಅವರನ್ನು ಮತ್ತೆ ಜೀವಂತ ಗೊಳಿಸಲಾಗುವುದೆಂದು ಅವರಿಗೇನು ತಿಳಿಯದೇ?
ಸೂಕ್ತ : 5
ಒಂದು ಮಹಾದಿನ ಅದು ಸಂಭವಿಸುವುದು.
ಸೂಕ್ತ : 6
ಅಂದು ಮಾನವರೆಲ್ಲಾ ವಿಶ್ವದೊಡೆಯನ ಮುಂದೆ ನಿಲ್ಲುವರು.
ಸೂಕ್ತ : 7
ನಿಮಗೆ ತಿಳಿದಿರಲಿ, ದುಷ್ಟರ ಕರ್ಮಗಳು ‘ಸಿಜ್ಜೀನ್’ನಲ್ಲಿವೆ.
ಸೂಕ್ತ : 8
‘ಸಿಜ್ಜೀನ್’ ಅಂದರೆ ಏನೆಂದು ನಿಮಗೇನು ಗೊತ್ತು?
ಸೂಕ್ತ : 9
ಅದೊಂದು ಲಿಖಿತ ಗ್ರಂಥ.
ಸೂಕ್ತ : 10
ಅಂದು ವಿನಾಶವಿದೆ - ಧಿಕ್ಕಾರಿಗಳಿಗೆ.
ಸೂಕ್ತ : 11
ಅವರು ಪ್ರತಿಫಲದ ದಿನವನ್ನು ತಿರಸ್ಕರಿಸುತ್ತಾರೆ.
ಸೂಕ್ತ : 12
ನಿಜವಾಗಿ, ಎಲ್ಲೆ ಮೀರಿದ ಪಾಪಿ ಮಾತ್ರ ಅದನ್ನು ಧಿಕ್ಕರಿಸುತ್ತಾನೆ.
ಸೂಕ್ತ : 13
ಅವನಿಗೆ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ಅವನು, ಇವೆಲ್ಲ ಗತಕಾಲದ ಕಥೆಗಳು ಎನ್ನುತ್ತಾನೆ.
ಸೂಕ್ತ : 14
ಹಾಗಲ್ಲ - ನಿಜವಾಗಿ ಅವರು ಮಾಡಿದ್ದ ಕರ್ಮಗಳು ಅವರ ಮನಸ್ಸುಗಳಿಗೆ ತುಕ್ಕು ಹಿಡಿಸಿವೆ.
ಸೂಕ್ತ : 15
ಹಾಗಲ್ಲ - ಅಂದು ಅವರು ತನ್ನ ಒಡೆಯನಿಂದ ಮರೆಯಲ್ಲಿರುವರು.
ಸೂಕ್ತ : 16
ತರುವಾಯ ಅವರು ನರಕವನ್ನು ಸೇರುವರು.
ಸೂಕ್ತ : 17
ನೀವು ತಿರಸ್ಕರಿಸುತ್ತಿದ್ದುದು ಇದನ್ನೇ ಎಂದು ಅವರೊಡನೆ ಹೇಳಲಾಗುವುದು.
ಸೂಕ್ತ : 18
ನಿಮಗೆ ತಿಳಿದಿರಲಿ; ಸಜ್ಜನರ ಕರ್ಮ ಪತ್ರವು ‘ಇಲ್ಲಿಯ್ಯೀನ್’ನಲ್ಲಿರುವುದು.
ಸೂಕ್ತ : 19
‘ಇಲ್ಲಿಯ್ಯೀನ್’ ಅಂದರೇನೆಂದು ನಿಮಗೇನು ಗೊತ್ತು?
ಸೂಕ್ತ : 20
ಅದೊಂದು (ಕರ್ಮಗಳ) ಲಿಖಿತ ಗ್ರಂಥ.
ಸೂಕ್ತ : 21
(ಅಲ್ಲಾಹನಿಗೆ) ನಿಕಟರಾಗಿರುವವರು ಅದರ ಬಳಿ ಹಾಜರಿರುವರು.
ಸೂಕ್ತ : 22
ಸಜ್ಜನರು ಖಂಡಿತ ಐಶಾರಾಮದಲ್ಲಿರುವರು.
ಸೂಕ್ತ : 23
ವೈಭವದ ಆಸನಗಳಲ್ಲಿದ್ದು ದೃಶ್ಯಗಳನ್ನು ಆಸ್ವದಿಸುವರು.
ಸೂಕ್ತ : 24
ನೀವು ಅವರ ಮುಖಗಳಲ್ಲಿ ಸುಖದ ಉಲ್ಲಾಸವನ್ನು ಕಾಣುವಿರಿ.
ಸೂಕ್ತ : 25
ಅವರಿಗೆ ಮುದ್ರೆ ಹಾಕಿ ಮುಚ್ಚಿಟ್ಟಿದ್ದ ಶುದ್ಧ ಮದಿರೆಯನ್ನು ಕುಡಿಸಲಾಗುವುದು.
ಸೂಕ್ತ : 26
ಅದರ ಮುದ್ರೆ ಕಸ್ತೂರಿಯದ್ದಾಗಿರುವುದು, ಸ್ಪರ್ಧಿಸುವವರು ಇದನ್ನು ಪಡೆಯಲು ಸ್ಪರ್ಧಿಸಲಿ.
ಸೂಕ್ತ : 27
ಅದರಲ್ಲಿ ‘ತಸ್ನೀಮ್’ನ ಮಿಶ್ರಣವಿರುವುದು.
ಸೂಕ್ತ : 28
ಅದೊಂದು ಚಿಲುಮೆ. ಅಲ್ಲಾಹನ ಆಪ್ತರಾಗಿರುವವರು (ಸ್ವರ್ಗವಾಸಿಗಳು) ಅದನ್ನು ಸೇವಿಸುವರು.
ಸೂಕ್ತ : 29
ಅಪರಾಧಿಗಳು (ಇಹಲೋಕದಲ್ಲಿ) ವಿಶ್ವಾಸಿಗಳನ್ನು ಕಂಡು (ಗೇಲಿ ಮಾಡಿ) ನಗುತ್ತಿದ್ದರು.
ಸೂಕ್ತ : 30
ಅವರ ಬಳಿಯಿಂದ ಹಾದು ಹೋಗುವಾಗ ತಾತ್ಸಾರದಿಂದ ಕೈ ಸನ್ನೆಗಳನ್ನು ಮಾಡುತ್ತಿದ್ದರು.
ಸೂಕ್ತ : 31
ಅವರು ತಮ್ಮ ಮನೆಯವರ ಬಳಿಗೆ ಮರಳುವಾಗ ಹೆಮ್ಮೆಯಿಂದ ಬೀಗುತ್ತಾ ಮರಳುತ್ತಿದ್ದರು.
ಸೂಕ್ತ : 32
ಅವರು ಇವರನ್ನು (ವಿಶ್ವಾಸಿಗಳನ್ನು) ಕಂಡಾಗ, ಇವರು ದಾರಿಗೆಟ್ಟವರು ಎನ್ನುತ್ತಿದ್ದರು.
ಸೂಕ್ತ : 33
ನಿಜವಾಗಿ ಅವರನ್ನು ಇವರ ಮೇಲ್ವಿಚಾರಣೆಗೇನೂ ಕಳಿಸಲಾಗಿರಲಿಲ್ಲ.
ಸೂಕ್ತ : 34
ಆದರೆ ಇಂದು ವಿಶ್ವಾಸಿಗಳು ಧಿಕ್ಕಾರಿಗಳನ್ನು ಕಂಡು ನಗುವರು.
ಸೂಕ್ತ : 35
ವೈಭವದ ಆಸನದಲ್ಲಿದ್ದು (ಧಿಕ್ಕಾರಿಗಳ ಗತಿಯನ್ನು) ಕಾಣುತ್ತಿರುವರು.
ಸೂಕ್ತ : 36
ಧಿಕ್ಕಾರಿಗಳಿಗೆ ಸಿಕ್ಕಿ ಬಿಟ್ಟಿತೇ, ಅವರು ಮಾಡುತ್ತಿದ್ದ ಕೃತ್ಯಗಳ ಪ್ರತಿಫಲ?