ಅಧ್ಯಾಯ 89: ಅಲ್ ಫಜ್ರ್ (ಮುಂಜಾವು)
ಸೂಕ್ತ : 1
ಮುಂಜಾವಿನಾಣೆ.
ಸೂಕ್ತ : 2
ಮತ್ತು ಹತ್ತು ರಾತ್ರಿಗಳಾಣೆ.
ಸೂಕ್ತ : 3
ಮತ್ತು ಸಮ ಹಾಗೂ ಬೆಸ ಸಂಖ್ಯೆಗಳಾಣೆ.
ಸೂಕ್ತ : 4
ಮತ್ತು ರಾತ್ರಿಯು ತೆರಳುವಾಗಿನಾಣೆ.
ಸೂಕ್ತ : 5
ಬುದ್ಧಿಯುಳ್ಳವರಿಗೆ ಇದರಲ್ಲಿ (ಧಾರಾಳ) ಪ್ರಮಾಣ ಇದೆಯಲ್ಲವೇ?
ಸೂಕ್ತ : 6
ನೀವು ನೋಡಿದಿರಾ, ನಿಮ್ಮ ಒಡೆಯನು ಆದ್ ಜನಾಂಗದವರಿಗೆ ಏನು ಮಾಡಿದನೆಂಬುದನ್ನು?
ಸೂಕ್ತ : 7
ಬೃಹತ್ ಸ್ತಂಭಗಳಿದ್ದ ಇರಮ್ ಎಂಬ ನಾಡನ್ನು?
ಸೂಕ್ತ : 8
ಅಂಥವುಗಳು (ಸ್ತಂಭಗಳು) ಬೇರಾವ ನಾಡಲ್ಲೂ ಸೃಷ್ಟಿಸಲ್ಪಟ್ಟಿಲ್ಲ.
ಸೂಕ್ತ : 9
ಮತ್ತು ಕಣಿವೆಯಲ್ಲಿ ಕಠೋರ ಕಲ್ಲುಗಳನ್ನು ಕೆತ್ತಿದ್ದ ಸಮೂದರು -
ಸೂಕ್ತ : 10
ಮತ್ತು ಬೃಹತ್ ಮೊಳೆಗಳ ಫಿರ್ಔನ್.
ಸೂಕ್ತ : 11
ಅವರೆಲ್ಲಾ (ತಮ್ಮ) ನಾಡುಗಳಲ್ಲಿ ಬಂಡಾಯವೆದ್ದಿದ್ದರು.
ಸೂಕ್ತ : 12
ಮತ್ತು ಅವರು ಅಲ್ಲಿ ಅಶಾಂತಿಯನ್ನು ಮೆರೆದಿದ್ದರು.
ಸೂಕ್ತ : 13
ಕೊನೆಗೆ ನಿಮ್ಮೊಡೆಯನು ಅವರ ಮೇಲೆ ಶಿಕ್ಷೆಯ ಚಾಟಿಯನ್ನು ಬೀಸಿದನು.
ಸೂಕ್ತ : 14
ನಿಮ್ಮ ಒಡೆಯನಂತು ಹೊಂಚಿನಲ್ಲಿದ್ದಾನೆ.
ಸೂಕ್ತ : 15
ಮನುಷ್ಯನನ್ನು ಅವನ ಒಡೆಯನು ಪರೀಕ್ಷೆಗೊಳಪಡಿಸಿ ಅವನಿಗೆ ಗೌರವವನ್ನೂ ಅನುಗ್ರಹವನ್ನೂ ದಯಪಾಲಿಸಿದಾಗ ಅವನು, ನನ್ನೊಡೆಯನು ನನ್ನನ್ನು ಗೌರವಾನ್ವಿತನಾಗಿಸಿದ್ದಾನೆ ಎನ್ನುತ್ತಾನೆ.
ಸೂಕ್ತ : 16
ಇನ್ನು ಅವನು (ಅಲ್ಲಾಹನು) ಆತನನ್ನು ಪರೀಕ್ಷೆಗೊಳಪಡಿಸಿ ಅವನ ಆದಾಯವನ್ನು ಸೀಮಿತ ಗೊಳಿಸಿದಾಗ ಅವನು ‘ನನ್ನೊಡೆಯನು ನನ್ನನ್ನು ಅಪಮಾನಿತನಾಗಿಸಿದ್ದಾನೆ’ ಎನ್ನುತ್ತಾನೆ.
ಸೂಕ್ತ : 17
ಹಾಗಲ್ಲ, ನಿಜವಾಗಿ ನೀವು ಅನಾಥನನ್ನು ಗೌರವಿಸುವುದಿಲ್ಲ.
ಸೂಕ್ತ : 18
ಬಡವನಿಗೆ ಉಣಿಸುವಂತೆ (ಪರಸ್ಪರ) ಪ್ರೋತ್ಸಾಹಿಸುವುದಿಲ್ಲ.
ಸೂಕ್ತ : 19
ಮತ್ತು ನೀವು ವಾರೀಸು ಸೊತ್ತನ್ನು (ಅಕ್ರಮವಾಗಿ) ಕಬಳಿಸುತ್ತೀರಿ.
ಸೂಕ್ತ : 20
ನೀವು ಸಂಪತ್ತನ್ನು ಅಪಾರವಾಗಿ ಪ್ರೀತಿಸುತ್ತೀರಿ.
ಸೂಕ್ತ : 21
ಹಾಗಲ್ಲ, ಭೂಮಿಯನ್ನು ಹುಡಿಗುಟ್ಟಲಾದಾಗ,
ಸೂಕ್ತ : 22
ನಿಮ್ಮೊಡೆಯನು ಬಂದಾಗ, ಹಾಗೂ ಮಲಕ್ಗಳು ಸಾಲುಗಟ್ಟಿದಾಗ,
ಸೂಕ್ತ : 23
ಅಂದು ನರಕವನ್ನು ಮುಂದೆ ತರಲಾಗುವುದು. ಅಂದು ಮನುಷ್ಯನಿಗೆ ವಿಷಯವು ಅರ್ಥವಾಗುವುದು. ಆದರೆ ಅಂದು ಅರ್ಥವಾದರೆ ಅವನಿಗೇನು ಲಾಭ?
ಸೂಕ್ತ : 24
ಅವನು ಹೇಳುವನು; ಅಯ್ಯೋ, ನಾನು ಈ ಬದುಕಿಗೆ ಪೂರ್ವ ಸಿದ್ಧತೆ ನಡೆಸಬೇಕಿತ್ತು.
ಸೂಕ್ತ : 25
ಅಂದು ಅವನು (ಅಲ್ಲಾಹನು) ನೀಡುವಂತಹ ಶಿಕ್ಷೆಯನ್ನು ಬೇರೆ ಯಾರೂ ನೀಡಲಾರರು.
ಸೂಕ್ತ : 26
ಮತ್ತು ಅವನು ಕಟ್ಟಿಡುವ ರೀತಿಯಲ್ಲಿ ಬೇರೆ ಯಾರೂ ಕಟ್ಟಿಡಲಾರನು.
ಸೂಕ್ತ : 27
(ಸಜ್ಜನರೊಡನೆ ಹೇಳಲಾಗುವುದು;) ಸಂತೃಪ್ತ ಚಿತ್ತವೇ,
ಸೂಕ್ತ : 28
ಸಂತೃಪ್ತನಾಗಿ ಮರಳು ನಿನ್ನ ಒಡೆಯನೆಡೆಗೆ - ಅವನೂ ನಿನ್ನಿಂದ ಸಂತೃಪ್ತನಾಗಿರುವನು.
ಸೂಕ್ತ : 29
ನನ್ನ ದಾಸರ ಜೊತೆ ಪ್ರವೇಶಿಸು.
ಸೂಕ್ತ : 30
ಮತ್ತು ನನ್ನ ಸ್ವರ್ಗವನ್ನು ಪ್ರವೇಶಿಸು.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran