ನಮ್ಮ ಜೀವನದ ಯಾವುದೋ ಒಂದು ಘಟ್ಟದಲ್ಲಿ ನಾವು ಎಂದೂ ಕಾಣದಂತಹಅಥವಾ ನಮ್ಮ ತಾಳಿಕೆಯ ಸಾಮರ್ಥ್ಯವನ್ನೂ ಮೀರಿದಂತಹ ಸವಾಲುಗಳನ್ನು ಎದುರಿಸುತ್ತೇವೆ. ಈ ಸನ್ನಿವೇಶದಲ್ಲಿ ನಾವು ನಮ್ಮ ಶಕ್ತಿ ಕಳೆದುಕೊಳ್ಳಬಹುದು, ಕೋಪಗೊಳ್ಳಬಹುದು, ಅಸಹಾಯಕರಾಗಬಹುದು, ಹೆದರಿಕೊಳ್ಳಬಹುದು, ಜಿಗುಪ್ಸೆ ಹೊಂದಬಹುದು, ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳಬಹುದು, ನನ್ನಿಂದ ಏನೂ ಮಾಡಲಾಗದು ಎಂದು ಬೇಸರವಾಗಬಹುದು ಅಥವಾ ಭಾವುಕರಾಗಬಹುದು. ಕೆಲವು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಿಗೆ ನಾವು ಸ್ಪಂದಿಸುವ ರೀತಿ ನಮ್ಮನ್ನೇ ಗೊಂದಲಕ್ಕೆ ಸಿಲುಕಿಸಬಹುದು ಅಥವಾ ಅಸ್ಥಿರಗೊಳಿಸಬಹುದು. ನಮ್ಮ ಬದುಕು ಯಾವುದೋ ಒಂದು ರೀತಿಯಲ್ಲಿ ಗಲಿಬಿಲಿಗೆ ಒಳಗಾದಂತೆ ಕಾಣಬಹುದು. ಇಂತಹ ಪರಿಸ್ಥಿತಿಯಲ್ಲಿ ಆಪ್ತ ಸಮಾಲೋಚನೆ ಪಡೆಯುವುದರಿಂದ ನಮ್ಮ ಸಂಕಷ್ಟಗಳ ಬಗ್ಗೆ ಒಂದು ವಿಶ್ವಾಸ ಮೂಡಿಸುವಂತಹ, ಅನುಕಂಪ ಭರಿತ ವಾತಾವರಣದಲ್ಲಿ ಮಾತನಾಡಲು ಅವಕಾಶ ದೊರೆಯುವುದೇ ಅಲ್ಲದೆ ಈ ಸವಾಲುಗಳನ್ನು ಪರಿಣಾಮಕಾರಿಯಾಗಿ, ಅರ್ಥಪೂರ್ಣವಾಗಿ ಎದುರಿಸಲು ನೆರವಾಗುತ್ತದೆ.