ಭಕ್ತಿ ಮರದಂತೆ.. ನಾವು ಮರಕ್ಕೆ ನೀರು ಹಾಕಿದಾಗ ಅದು ಹೇಗೆ ಫಲ ನೀಡುತ್ತದೆಯೋ ಅದೇ ರೀತಿ ಭಕ್ತಿಗೆ ನಾವು ಪ್ರಾಮುಖ್ಯತೆಯನ್ನು ನೀಡಿದಷ್ಟು ಆಳವಾದ ಚಿಂತನೆಗಳು ಬೆಳೆಯುತ್ತಾ ಹೋಗುತ್ತವೆ. ಹಾಗಾದರೆ ನಿಜವಾಗಿಯೂ ಭಕ್ತಿಯೆಂದರೇನು..? ಭಕ್ತಿಯ 9 ರೂಪಗಳಾವುವು..?
ಪುರಾಣದಲ್ಲಿ, ಪ್ರಹ್ಲಾದನು ತನ್ನ ಗುರುಗಳು ತನಗೆ ಕಲಿಸಿದ ಭಕ್ತಿಯ ಒಂಬತ್ತು ರೂಪಗಳನ್ನು ಅಂದರೆ ನವವಿಧ ಭಕ್ತಿಗಳನ್ನು ತನ್ನ ತಂದೆ ಹಿರಣ್ಯ ಕಶ್ಯಪುವಿಗೆ ವಿವರಿಸುತ್ತಾನೆ. ಅವುಗಳೆಂದರೆ ಶ್ರವಣ, ಕೀರ್ತನ, ಸ್ಮರಣೆ, ಪಾದ-ಸೇವೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ ಮತ್ತು ಆತ್ಮ-ನಿವೇದನೆ. ಇವುಗಳ ಬಗ್ಗೆ ತಿಳಿದುಕೊಳ್ಳುವ ಸಂಚಿಕೆ ಇಂದಿನದು.
ಭಕ್ತಿಯ ಮೊದಲ ಪ್ರಕಾರ ಶ್ರವಣ, ಅಂದ್ರೆ ದೇವರ ಹೆಸರುಗಳು, ಕಥೆಗಳು ಮತ್ತು ಲೀಲೆಗಳನ್ನು ಕೇಳುವುದು. ಇದರಿಂದ ಆ ವ್ಯಕ್ತಿಯು ದೇವರಿಗೆ ಹತ್ತಿರವಾಗುತ್ತಾನೆ ಅನ್ನೋದು ನಮ್ಮ ನಂಬಿಕೆ. ಅದರ ಅತೀಂದ್ರಿಯ ಅರ್ಥವೆಂದರೆ ಅನಾಹದ ಶಬ್ದವನ್ನು ಕೇಳುವುದು, ಇದು ನಮ್ಮೊಳಗೆ ನಿರಂತರವಾಗಿ ಪ್ರತಿಧ್ವನಿಸುವ ಶಬ್ದವಾಗಿರುತ್ತದೆ.
ಸಂಗೀತ ವಾದ್ಯಗಳನ್ನು ಬಳಸುವುದು ಮತ್ತು ಹೆಚ್ಚಾಗಿ ಗುಂಪಿನಲ್ಲಿ ಶ್ಲೋಕಗಳನ್ನು ಅಥವಾ ಕೀರ್ತನೆಗಳನ್ನು ಪಠಿಸುವ ಅಥವಾ ಹಾಡುವ ಮೂಲಕ ದೇವರನ್ನು ಮೆಚ್ಚಿಸುವುದನ್ನ ಕೀರ್ತನ ಅಂತ ಹೇಳಲಾಗತ್ತೆ. ಇದು ಭಕ್ತಿಯ ಎರಡನೇ ಪ್ರಕಾರ. ಕೀರ್ತನವು ಉತ್ತಮವಾದ ಭಾವನೆಗಳನ್ನು ಮತ್ತು ದೈವಿಕ ನಂಬಿಕೆಯನ್ನು ಉತ್ತೇಜಿಸುವ ಶಕ್ತಿಯನ್ನು ಹೊಂದಿದೆ. ದೇವರಿಗೆ ತಮ್ಮ ಭಕ್ತಿಯನ್ನ ವ್ಯಕ್ತಪಡಿಸುವ ಒಂದು ವಿಧಾನ ಅಂತಲೇ ಹೇಳಬಹುದು.
ಇನ್ನು ಮೂರನೇ ಭಕ್ತಿಯ ಪ್ರಕಾರವಾದ ಸ್ಮರಣೆಯಲ್ಲಿ, ಭಕ್ತನು ಭಗವಂತನ ನಾಮ ಮತ್ತು ರೂಪಗಳನ್ನು ಸ್ಮರಿಸುತ್ತಾನೆ. ಇದು ಕಥೆಗಳನ್ನು ನೆನಪಿಸಿಕೊಳ್ಳುವುದು, ದೇವರ ಮಹಿಮೆಯ ಬಗ್ಗೆ ಇತರರಿಗೆ ಕಲಿಸುವುದು, ದೇವರ ಅಂಶಗಳನ್ನು ಧ್ಯಾನಿಸುವುದು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ದೇವರನ್ನು ಸ್ಮರಿಸುವ ಇನ್ನೊಂದು ವಿಧಾನವೆಂದರೆ ಜಪ. ದೇವರನ್ನು ಸ್ಮರಿಸುವುದು ನಮ್ಮನ್ನು ಯಾವಾಗಲೂ ದೇವರಿಗೆ ಹತ್ತಿರವಾಗಿಸುತ್ತದೆ. ಸ್ಮರಣೆ ಒಂದು ಕಠಿಣ ರೂಪವಾಗಿದ್ದು, ಅದಕ್ಕೆ ಮನಃಪೂರ್ವಕತೆಯ ಅಗತ್ಯವಿರುತ್ತದೆ.
ಪಾದ-ಸೇವೆ ಭಕ್ತಿಯ ನಾಲ್ಕನೇ ಪ್ರಕಾರ. ನಮ್ಮ ಸೇವೆಯನ್ನು ಭಗವಂತನ ಅಥವಾ ಗುರುಗಳ ಪಾದದಲ್ಲಿ ಅರ್ಪಿಸುವಂತದ್ದಾಗಿದೆ. ಒಂದು ವೇಳೆ ಗುರುಗಳು ಅಥವಾ ದೇವರ ವಿಗ್ರಹ ಇಲ್ಲದಿದ್ದರೆ, ಅವನ ದೈವಿಕ ಅನುಗ್ರಹವನ್ನು ಪ್ರತಿನಿಧಿಸುವ ಅವನ ಪಾದುಕೆಗಳಿಗೆ ನಮಸ್ಕಾರವನ್ನು ಮಾಡಬಹುದು. ಪಾದ ಸೇವೆಯು ವ್ಯಕ್ತಿಗೆ ತಾಳ್ಮೆಯನ್ನು ಕಲಿಸುತ್ತದೆ.
ದೇವರ ಆಶೀರ್ವಾದ ಪಡೆಯಲು ಅರ್ಚನೆ – ಪೂಜೆ ಮಾಡುತ್ತಾರೆ. ಇದು ಭಕ್ತಿಯ ಐದನೇ ವಿಧವಾಗಿದೆ. ಸಾಂಪ್ರದಾಯಿಕವಾಗಿ ಇದನ್ನು ಷೋಡಶೋಪಚಾರ ಅಥವಾ ಹದಿನಾರು ವಿಧಾನಗಳಿಂದ ಮಾಡುವ ಪೂಜೆಯಾಗಿದೆ. ಒಬ್ಬರು ದೇವರ ಆವಾಹನೆ, ಆಸನ, ಸ್ನಾನ, ಅಲಂಕಾರ, ಗಂಧ ಲೇಪನ, ಅರ್ಪಣೆ ಮೊದಲಾದ 16 ರೀತಿಯ ಉಪಚಾರಗಳನ್ನು ಮಾಡಲಾಗುತ್ತದೆ. ಇದೂ ಒಂದು ಭಕ್ತಿಯ ಪ್ರಾಕಾರವಷ್ಟೆ. ಆದರೆ ಇದನ್ನ ಶ್ರದ್ಧೆಯಿಂದ ಮಾಡಿದವನು ದೇವರಿಗೆ ಹತ್ತಿರವಾಗುತ್ತಾನೆ.
ಕೃತಜ್ಞತೆಯನ್ನು ವ್ಯಕ್ತಪಡಿಸುವ ಭಕ್ತಿಯ ಪ್ರಾಕಾರವೇ ವಂದನೆ. ಅಂದರೆ, ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಲುವಾಗಿ ದೇವತೆ, ಗುರುವಿನ ಮುಂದೆ ಸಾಷ್ಟಾಂಗ ನಮಸ್ಕಾರವನ್ನು ಮಾಡುವುದಾಗಿದೆ. ನಮ್ರತೆಯಿಂದ ನಮಸ್ಕರಿಸುವುದು ಮತ್ತು ಸಾಷ್ಟಾಂಗ-ನಮಸ್ಕಾರ ಅಂದರೆ ಎಂಟು ಅಂಗಗಳಿಂದ ಭೂಮಿಯನ್ನು ಸ್ಪರ್ಶಿಸಿ, ನಂಬಿಕೆ ಮತ್ತು ಗೌರವದಿಂದ, ದೇವರ ಪ್ರತಿಮೆಯ ಮುಂದೆ ನಮಸ್ಕರಿಸುವುದಾಗಿದೆ.
ದಾಸ್ಯ ಇದು ಭಕ್ತಿಯ ಏಳನೇ ವಿಧಾನವಾಗಿದೆ. ದಾಸ್ಯ ಅನ್ನೋ ಸಂಸ್ಕೃತ ಪದದ ಅರ್ಥ ಸೇವೆ ಅಥವಾ ಗುಲಾಮಗಿರಿ ಅಂತ. ದಾಸ್ಯವು ದಾಸ್ಯದ ಮೂಲಕ ವ್ಯಕ್ತಪಡಿಸುವ ದೇವರ ಮೇಲಿನ ಪ್ರೀತಿ ಮತ್ತು ಭಕ್ತಿ. ಅಂದರೆ ದೇವರನ್ನು ಅಥವಾ ಗುರುವನ್ನು ಸಮರ್ಪಣಾ ಭಾವದಿಂದ ಸೇವೆ ಮಾಡುವುದು. ದೇವಸ್ಥಾನವನ್ನು ಶುಚಿಗೊಳಿಸುವುದು, ಬಡವರ ಸೇವೆ ಮಾಡುವುದು, ಧರ್ಮಗ್ರಂಥಗಳನ್ನು ಧ್ಯಾನಿಸುವುದು ಅಥವಾ ದೇವರ ಸೇವಕನಾಗಿ ಯಾವುದೇ ಕೆಲಸವನ್ನು ಮಾಡುವುದು, ಇದನ್ನ ದಾಸ್ಯದ ಭಕ್ತಿ ಅಂತ ಹೇಳಲಾಗತ್ತೆ.
ಭಕ್ತಿಯ ಎಂಟನೇ ವಿಧಾನ ಸಖ್ಯ ಭಕ್ತಿ, ಅಂದರೆ ದೇವರೊಂದಿಗೆ ಸ್ನೇಹಿತರಾಗುವುದು ಅಂತರ್ಥ. ಆತ್ಮೀಯ ಸ್ನೇಹಿತರಂತೆ, ಭಕ್ತನು ಯಾವಾಗಲೂ ದೇವರೊಂದಿಗೆ ಒಟ್ಟಿಗೆ ಇರುತ್ತಾನೆ ಮತ್ತು ತನ್ನಂತೆಯೇ ಅವನನ್ನು ಪ್ರೀತಿಸುತ್ತಾನೆ ಅಂತ ನಂಬುವ ಒಂದು ವಿಧಾನ. ಭಕ್ತನು ದೇವರಿಗಾಗಿ ಏನ್ ಬೇಕಾದ್ರು ಮಾಡೋದಕ್ಕೆ ರೆಡಿ ಇರ್ತಾನೆ ಅಂತಹ ದೃಢವಾದ ಭಕ್ತಿ ಈ ಸಖ್ಯ ಭಕ್ತಿ. ವಿಭೀಷಣ, ಉದ್ಧವ, ಸುಗ್ರೀವ, ಸುದಾಮ, ಅರ್ಜುನ, ಇತ್ಯಾದಿ, ಈ ರೀತಿಯ ಭಕ್ತಿ ಅಥವಾ ಸಖ್ಯ ಭಾವವನ್ನು ವ್ಯಕ್ತಪಡಿಸಿದ ಭಕ್ತರ ಉದಾಹರಣೆಗಳಾಗಿವೆ.
ಇನ್ನು ಕೊನೆಯ ಭಕ್ತಿಯ ವಿಧಾನ ಆತ್ಮ-ನಿವೇದನೆ, ಇದರಲ್ಲಿ ಭಕ್ತನು ತನ್ನ ದೇಹ, ಮನಸ್ಸು ಮತ್ತು ಆತ್ಮವನ್ನು ದೇವರಿಗೆ ಅರ್ಪಿಸುತ್ತಾನೆ ಮತ್ತು ಅವನಲ್ಲಿ ಆಶ್ರಯ ಪಡೆಯುತ್ತಾನೆ ಅನ್ನೋ ಭಾವ ಈ ಭಕ್ತಿಯದು. ಅದು ಸಂತೋಷವಾಗಲಿ, ದುಃಖವಾಗಲಿ, ಭಕ್ತನು ಅದನ್ನು ದೇವರ ಉಡುಗೊರೆಯಾಗಿ ನೋಡುತ್ತಾನೆ. ಅವನು ತನ್ನನ್ನು ದೇವರ ಸಾಧನವಾಗಿ ನೋಡುತ್ತಾನೆ. ಇದುವೇ ಆತ್ಮ ನಿವೇದನೆಯಾಗಿದೆ ಅಂತ ಹೇಳ್ತಾ ಇಂದಿನ ಸಂಚಿಕೆಗೆ ಪೂರ್ಣವಿರಾಮವನ್ನಿಡ್ತಾ ಇದೀನಿ.