👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ನುಡಿದರೆ ಮುತ್ತಿನ ಹಾರ
Communico, ergo sum!
[ಏನು ನುಡಿಯುತ್ತೀರೋ ಅದೇ ನೀವು! ಮಾತಿನ ಮಹತ್ವ ಅಷ್ಟಿದೆ. ಪ್ರಪಂಚದ ವ್ಯವಹಾರಗಳೆಲ್ಲವೂ ಮಾತಿನಿಂದಲೇ. ಮಾತಿನಿಂದಲೆ ಗಳಿಕೆ, ಮಾತಿನಿಂದಲೆ ಉಳಿಕೆ. ಮಾತಿನಿಂದಲೆ ತಿಳಿವು, ಮಾತಿನಿಂದಲೆ ಅಳಿವು. ಹಾಗಾದರೆ ನಮ್ಮ ನುಡಿ ಹೇಗಿರಬೇಕು?]
ನುಡಿ ಅಂದರೆ ಏನು?
ನುಡಿ ಅಂದರೆ ಇಲ್ಲಿ ಕೇವಲ ಮಾತು ಅಲ್ಲ. ಎಲ್ಲ ರೀತಿಯ ಮಾನವ ಸಂಪರ್ಕ ಮತ್ತು ಸಂವಹನಗಳೂ ನುಡಿ. ಪರಸ್ಪರ ಸಂಪರ್ಕ ಸಂವಹನಗಳೆ ನಮ್ಮ ಅಸ್ತಿತ್ವ. Communico, ergo sum! ಅಂದರೆ, I commucate, therefore I exist. ಇದು ವಿಚಿತ್ರ ಎನಿಸಿದರೂ ಸತ್ಯ. ಆದ್ದರಿಂದ ನುಡಿ ಅಥವ ಮಾತಿನ ಮಹತ್ವವನ್ನು ಇದಕ್ಕಿಂತ ಹೆಚ್ಚಿಗೆ ಒತ್ತಿ ಹೇಳಲು ಸಾಧ್ಯವಿಲ್ಲ. ವಾಟ್ಸಾಪ್, ಇನ್ಸ್ಟಗ್ರಾಂ, ಟ್ವಿಟರ್, ಟಿಕ್-ಟಾಕ್, ಯೂ-ತೂಬು, ಮುಖ-ಪುಸ್ತಕ, ಇತ್ಯಾದಿ ಸೋಶಿಯಲ್ ಮೀಡಿಯಗಳೆ ನಮ್ಮ ಪ್ರಪಂಚ ಆಗಿವೆ. ಒಂದು ದಿನ, ಒಂದು ಗಂಟೆ ಒಂದು ಸಂದೇಶ ಬರದಿದ್ದರೆ ಏನೋ ಕಸಿವಿಸಿ; ಸುಮ್ಮ ಸುಮ್ಮನೆ ಮೊಬೈಲ್ ತೆರೆದು ನೋಡುವ ತುಡಿತ. ಇವೇ ನಮ್ಮನ್ನು ನಿರೂಪಿಸುವ ಸೂತ್ರಗಳಾಗಿವೆ! ಆದ್ದರಿಂದ ಮಾತೇ ನಾನು; ಮಾತೇ ಆತ್ಮ!
೨ ಮಾತಿನಿಂದ ಸರ್ವಸ್ವ
ಲಕ್ಷ್ಮೀರ್ವಸತಿ ಜಿಹ್ವಾಗ್ರೇ,
ಜಿಹ್ವಾಗ್ರೇ ಮಿತ್ರಬಾಂಧವಾಃ
ಜಿಹ್ವಾಗ್ರೇ ಬಂಧನಂ ಪ್ರಾಪ್ತಂ,
ಜಿಹ್ವಾಗ್ರೇ ಮರಣಂ ಧ್ರುವಂ! (ಶಾರ್ಙಧರ ಪದ್ಧತಿ)
ಮಾತಿನಿಂದ ಸಿರಿ, ಗೆಳೆಯರು, ಬಂಧುಗಳು, ದುಃಖ, ಜೈಲು, ಮತ್ತು ಸಾವು ಕೂಡ. ಇದನ್ನೆ ಕನ್ನಡದಲ್ಲಿ ಹೀಗೆ ಹೇಳಿದ್ದಾನೆ ಸರ್ವಜ್ಞ:
ಮಾತಿನಿಂ ನಗೆ ನುಡಿಯು, ಮಾತಿನಿಂ ಹಗೆ ಹೊಲೆಯು
ಮಾತಿನಿಂ ಸರ್ವ ಸಂಪದವು, ಲೋಕಕ್ಕೆ
ಮಾತೆ ಮಾಣಿಕ್ಯ ಸರ್ವಜ್ಙ
೩ ಹಾಗಾದರೆ ನುಡಿ ಹೇಗಿರಬೇಕು?
ನುಡಿದರೆ ಮುತ್ತಿನ ಹಾರದಂತಿರಬೇಕು!
ಇದು ಬಸವ ವಚನ
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು!
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ ?
೩.೧ ಮುತ್ತಿನ ಗುಟ್ಟು
ಮುತ್ತೇ ಏಕೆ? ಮುತ್ತು ಸಾಂದ್ರ, ಅಂದರೆ ಮಾತು ಗಟ್ಟಿ ಆಗಿರಬೇಕು; ಒಂದು ಮುತ್ತು ಹುಟ್ಟಬೇಕಾದರೆ ಸಮಯ ಬೇಕು, ಸಾವಧಾನವಾಗಿ ಹರಳುಗಟ್ಟಬೇಕು. ಹಾಗೆಯೆ, ಮಾತು ವಿಚಾರಪೂರ್ವಕ ಬೆಳೆದು ಅರ್ಥಗರ್ಭಿತವಾಗಿ ಹೊರಬರಬೇಕು. ಮುತ್ತು ವಿರಳ; ಸಾವಿರ ಸಿಂಪಿಗಳಲ್ಲಿ ಒಂದು ಮುತ್ತನ್ನು ಹೊಂದಿರಬಹುದು. ಮಾತು ಕೂಡ ಅನಾವಶ್ಯಕವಾಗಿರಬಾರದು. ಅಂದರೆ ಪದಜಿಪುಣನಾಗಿರಬೇಕು.
೩.೨ ಹಾರದ ಬಂಧ
ಅದೆಲ್ಲ ಸರಿ. ಹಾರ ಏಕೆ? ಪದಗಳನ್ನು ಅಸಂಬದ್ಧವಾಗಿ ಅಲ್ಲಲ್ಲಿ ಉಗುಳಿದರೆ ನುಡಿ ಅಲ್ಲ. ಪದಗಳು ಪೋಣಿಸಿದ ಹಾರದಂತೆ ಅರ್ಥ ಮತ್ತು ತರ್ಕ-ವಿಚಾರಗಳ ಸೂತ್ರದಲ್ಲಿ ಬಂಧಿತವಾಗಿರಬೇಕು. ತರ್ಕದ ಬಲ ಬುದ್ಧಿಯನ್ನು ಗೆಲ್ಲುವಂತಿರಬೇಕು.
೩.೩ ಮಾಣಿಕ್ಯದ ಹೊಳಪು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ಮಾಣಿಕ್ಯ ಶುದ್ಧ ಮತ್ತು ಪ್ರಕಾಶಮಾನ. ಹಾಗೆ ನಾವು ನುಡಿದ ನುಡಿ ಶುದ್ಧ ಜ್ಞಾನದೀಪವಾಗಿರಬೇಕು. ನಮ್ಮ ಮಾತಿನಲ್ಲಿ ತಿಳಿವಿನ ಹೊಳಹು ಸೂಸುತ್ತಿರಬೇಕು.
೩.೪ ಸ್ಫಟಿಕದ ಸರಳು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ಸ್ಫುಟವಾದ ಮಾತು ಸ್ಫಟಿಕದಂತೆ. ಶಲಾಕೆ ಅಂದರೆ ನೇರವಾದದ್ದು. ಸುತ್ತು-ಬಳಸು, ವಕ್ರತೆ ಇಲ್ಲದ್ದು. ಅನರ್ಥ, ನಿರರ್ಥ, ಅನ್ಯಾರ್ಥಗಳು ಇಲ್ಲದೆ ( see dasa kollu article) ನೇರವಾಗಿ ಎದೆ ಮುಟ್ಟುವಂತೆ ಇರಬೇಕು; ಸ್ಫಟಿಕ crystallize ಆಗುವಂತೆ ಇಂಗಿತ ಅರ್ಥ ತಂತಾನೆ ಮನಸ್ಸಿನಲ್ಲಿ ಇಳಿದು ಗಟ್ಟಿಯಾಗಬೇಕು.
೩.೫ ನುಡಿಯ ಲಿಂಗ
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು!
ವಿವರಿಸಲು ಇದು ತುಸು ಕಠಿನವಾದದ್ದು.
ಇಲ್ಲಿ, ಮೆಚ್ಚು ಅಂದರೆ ಒಪ್ಪವಂತಿರಬೇಕು, ಕೇಳುಗ ಮತ್ತು ಮಾತಾಡುವವ ಇಬ್ಬರೂ!; ಆಡಿದ್ದು ಸರಿ ಅಲ್ಲ ಅಂತ ಅನಿಸಿದರೆ ಅದು ಖಂಡಿತ ಸರಿ ಅಲ್ಲ!
ಮೊದಲನೆಯದಾಗಿ, ಸಂಸ್ಕೃತದಲ್ಲಿ ಲಿಂಗ ಅಂದರೆ ಶಬ್ದದ ಧರ್ಮ ಅಥವ ಶಬ್ದತ್ವ; ಅಂದರೆ ಲಿಂಗದಿಂದ ಶಬ್ದಕ್ಕೆ ಅರ್ಥ, ಲಿಂಗದಿಂದ ಶಬ್ದಕ್ಕೆ ಸಾಮರ್ಥ್ಯ; ಲಿಂಗದಿಂದೆ ಶಬ್ದಗಳಲ್ಲಿ ಹೊಂದಾಣಿಕೆ, ಅರ್ಥ ಸಮನ್ವಯ. ಲಿಂಗ ಇಲ್ಲದ ಮಾತು ಕೇವಲ ಧ್ವನಿಸಮೂಹ ಮಾತ್ರ; ಶಬ್ದ ಬರಿ ಸದ್ದು, ಸೊಲ್ಲು ಬರಿ ಗುಲ್ಲು.
ಆದ್ದರಿಂದ ಯಾವ ಮಾತುಗಳಲ್ಲಿ ಅರ್ಥ ತುಂಬಿದೆಯೋ, ಸಾಮರ್ಥ್ಯ ಹುದುಗಿದೆಯೋ, ಹೊಂದಾಣಿಕೆ ಇದೆಯೊ ಅಂದರೆ ಲಿಂಗ ಸಂಪೂರ್ಣ ಮೆಚ್ಚಿದೆಯೋ, ಅಂತಃಸಾಕ್ಷಿ ಒಪ್ಪಿದೆಯೋ ಆ ಮಾತುಗಳೆ ಆಡಲು ತಕ್ಕವು.
ಎರಡನೆಯದಾಗಿ, ಲಿಂಗ ಅಂದರೆ ಪಂಚ ಕೋಶ ಮೀರಿದ ಪ್ರಜ್ಞಾನ, ಆತ್ಮ; ಲಿಂಗ ಅಂದರೆ ಪರಮಾತ್ಮ. ಜನತಾ ಜನಾರ್ದನ ಅಂದಂತೆ ಜನತೆಯೆ ದೇವರು. ಅದಕ್ಕೆ, ಎದುರ ಬಂದವರಲ್ಲಿರುವ ಪರಮಾತ್ಮನಿಗೆ ನಮಸ್ಕಾರ ಮಾಡುವುದು ನಮ್ಮ ಸಂಸ್ಕೃತಿ. ಲಿಂಗವೆ ನಮ್ಮಲ್ಲಿರುವ ಪ್ರಜ್ಞೆ ಮತ್ತು ಆತ್ಮಸಾಕ್ಷಿ.
ಇದಕ್ಕೆ ಮೆಚ್ಚಿಕೆಯಾಗುವ ನುಡಿಗೆ ಮೂಲ ನಮ್ಮ ವಿಚಾರ ಆಚಾರಗಳು - ನಡೆ ಬಗೆಗಳೆ ನುಡಿಯ ತಳಹದಿ. ಅಂದರೆ ಮಾತು ನಾಲಗೆಯಲ್ಲಿ ಇಲ್ಲ, ನಮ್ಮ ವಿಚಾರ-ಆಚಾರಗಳಲ್ಲಿ ನೆಲೆಸಿದೆ. ಬಗೆ-ನಡೆ-ನುಡಿ ಹೊಂದಾಣಿಕೆಯೆ ಲಿಂಗ. ಬಗೆ-ನಡೆ-ನುಡಿ ಮೂರರ ಸಂಗಮದಲ್ಲೇ ಲಿಂಗೋದ್ಭವ; ಅರ್ಥದ ಉತ್ಪತ್ತಿ. ವಿಚಾರಕ್ಕೆ ಹೊಂದದ ನಡೆಗೆ, ನಡೆ ಇಲ್ಲದ ಮಾತಿಗೆ ಬೆಲೆ ಇಲ್ಲ. ಅದನ್ನು ಜನತೆಯೂ ಮೆಚ್ಚದು, ಜನಾರ್ದನನೂ ಮೆಚ್ಚನು, ನಮ್ಮ ಅಂತರಾತ್ಮವೂ ಮೆಚ್ಚದು.
ಇರಲಿ, ಆಧ್ಯಾತ್ಮಿಕ ವಿಚಾರಗಳು ಈ ಬಿತ್ತರಿಕೆಗೆ ...
... ಪೂರ್ತಿ ಲೇಖನವನ್ನು ಜಾಲತಾಣದಲ್ಲಿ ಓದಿ
ನಿಮ್ಮವನೆ ಆದ, ವಿಶ್ವೇಶ್ವರ ದೀಕ್ಷಿತ
ಬಿತ್ತರಿಕೆ ೧೪ ಕಾಲ ೨೦೨೪, ಸಂಖ್ಯೆ ೦೨: ಬಿಕಾಸ ೧೪-೨೦೨೪-೦೨
Episode 14, Year 2024 No. 02 : BIKASA 14-2024-02